
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಓಲ್ಡ್ ಮದ್ರಾಸ್ ರಸ್ತೆಯಿಂದ ಮೈಲನಹಳ್ಳಿಯವರೆಗಿನ ರಸ್ತೆ ಕಾಮಗಾರಿ ಕೈಗೆತ್ತಿಕೊಂಡು ಸರಿ ಸುಮಾರು 8 ವರ್ಷ ಕಳೆದಿದ್ದರೂ ಸಹ ರಸ್ತೆ ಕಾಮಗಾರಿ ಮಾತ್ರ ಪೂರ್ಣಗೊಂಡಿರಲಿಲ್ಲ. ಅರ್ಧಂ ಬರ್ಧಂ ಕಾಮಗಾರಿ ಅವೈಜ್ಞಾನಿಕ ರಸ್ತೆಯಿಂದ ವಾಹನ ಸವಾರರು ಸೇರಿದಂತೆ ಸ್ಥಳೀಯ ನಿವಾಸಿಗಳು ಹೈರಾಣಾಗಿದ್ದರು. ಇದರಿಂದ ಪ್ರತಿನಿತ್ಯ ಈ ಸಾವಿನ ಹೆದ್ದಾರಿಯಲ್ಲಿ ಸಾವು ನೋವುಗಳು ಸಂಭವಿಸುತ್ತಿದ್ದವು.
ಇದರಿಂದ ರೋಸಿ ಹೋಗಿದ್ದ ಬೂದಿಗೆರೆ ಹಾಗೂ ಸುತ್ತಮುತ್ತಲ ಗ್ರಾಮದ ಜನರು ಏರ್ಪೋರ್ಟ್ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದರು. ಆದರೆ ಮಂದ ಚರ್ಮದ ಕೆಆರ್ಡಿಸಿಎಲ್ ಮಾತ್ರ ಇದಕ್ಕೆ ಕ್ಯಾರೇ ಎಂದಿರಲಿಲ್ಲ. ಪ್ರತಿಭಟನೆ ಮಾಡಿ ವರುಷ ಉರುಳಿದರೂ ಸಹ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಕಾರಣ ಮತ್ತೆ ಆಕ್ರೋಶಗೊಂಡ ಜನತೆ ಮತ್ತೊಮ್ಮೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಕೆಆರ್ಡಿಸಿಎಲ್ ಎಂಡಿ ಸ್ಥಳಕ್ಕೆ ಬರುವಂತೆ ಮಾಡಿದ್ದರು. ಈ ವೇಳೆ ಕೆಆರ್ಡಿಸಿಎಲ್ ಎಂಡಿ ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೂ ಸಹ ಕೆಲ ತಿಂಗಳು ಇಲ್ಲಿನ ಸವಾರರು ಅದೇ ಹಳೇ ಪರಿಸ್ಥಿತಿ ಎದುರಿಸಬೇಕಾಯಿತು.
ಕೊನೆಗೂ ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತುಕೊಂಡಿರುವ ಕೆಆರ್ಡಿಸಿಎಲ್ ಅವೈಜ್ಞಾನಿಕ ರಸ್ತೆಗೆ ತೇಪೆ ಭಾಗ್ಯ ನೀಡಲು ಮುಂದಾಗಿದೆ. ಪ್ರತಿಭಟನೆ ಮಾಡಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಎಂದು ಆಗ್ರಹಿಸಿದ್ರೆ ಕೆಆರ್ಡಿಸಿಎಲ್ ಮಾತ್ರ ಮತ್ತೆ ತನ್ನ ಹಳೇ ಚಾಳಿಯನ್ನು ಮುಂದುವರೆಸಿದ್ದು, ಹಳ್ಳ ಬಿದ್ದ ಜಾಗಗಳಲ್ಲಿ ತೇಪೆ ಹಾಕಿ ಸವಾರರ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಇದರಿಂದ ಕೆಆರ್ಡಿಸಿಎಲ್ ಈ ದಶಕದಲ್ಲೂ ಕಾಮಗಾರಿಯನ್ನು ಸಂಪೂರ್ಣಗೊಳಿಸುವುದಿಲ್ಲ ಎಂಬ ಸುಳಿವು ಪರೋಕ್ಷವಾಗಿ ನೀಡಿದಂತೆ ಕಾಣುತ್ತಿದೆ ಎಂಬುದು ಗ್ರಾಮಸ್ಥರ ಮಾತಾಗಿದೆ.