2026-27ನೇ ಸಾಲಿನ ಬಜೆಟ್

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು 2026-27ನೇ ಸಾಲಿನ ರಾಜ್ಯ ಬಜೆಟ್ ಅನ್ನು ಇಂದು ವಿಧಾನಸೌಧದಲ್ಲಿ ಮಂಡಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ ಯೋಜನೆಗಳ ಕುರಿತು ವಿವರ ಕೆಳಕಂಡಂತಿದೆ.
• ದೊಡ್ಡಬಳ್ಳಾಪುರದಲ್ಲಿ ಹೊಸದಾಗಿ ಸಂಚಾರ ಪೊಲೀಸ್ ಠಾಣೆ ಸ್ಥಾಪನೆ ಮಾಡಲಾಗುವುದು.
• ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಮತ್ತು ನಂದಗುಡಿ ಹೋಬಳಿಗಳ 59 ಕೆರೆಗಳಿಗೆ ಹೆಚ್.ಎನ್ ವ್ಯಾಲಿ ಯೋಜನೆಯಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಮೂಲಕ ತುಂಬಿಸುವ ಕಾಮಗಾರಿಯನ್ನು 140 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುವುದು.
• ಬೆಂಗಳೂರು ನಗರದ ವೃಷಭಾವತಿ ವ್ಯಾಲಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 308 ಎಂ.ಎಲ್.ಡಿ. ನೀರಿನಿಂದ 259 ಕೆರೆಗಳನ್ನು ತುಂಬಿಸುವ ಮೂಲ ಯೋಜನೆಯ ಪೈಕಿ ಗೋಪಾಲಪುರ ಕೆರೆಯಿಂದ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ 119 ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಯನ್ನು 650 ಕೋಟಿ ರೂ.ಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು.
• ದೊಡ್ಡಬಳ್ಳಾಪುರದಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ಪ್ರಾರಂಭಿಸಲಾಗುವುದು.
• ಬೆಂಗಳೂರು ನಗರದ ದಟ್ಟಣೆಯನ್ನು ಕಡಿಮೆ ಮಾಡಲು ನೆಲಮಂಗಲ-ತಾವರೆಕೆರೆ-ಬಿಡದಿ ಮಧ್ಯಂತರ ವರ್ತುಲ ರಸ್ತೆಯನ್ನು (ಬಿ.ಎಂ.ಆರ್.ಡಿ.ಎ) ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರಗಳ ಆರ್ಥಿಕ ಸಂಪನ್ಮೂಲಗಳಿಂದ ನಿರ್ಮಿಸಲಾಗುವುದು.
• ರಾಜ್ಯದ 2ನೇ ಮತ್ತು 3ನೇ ಹಂತದ ನಗರವಾದ ಹೊಸಕೋಟೆ ಉದ್ಯಮಿಗಳಿಗೆ Incubation ಸೌಲಭ್ಯಗಳನ್ನು ಒದಗಿಸಲು ಕಿಯೋನಿಕ್ಸ್ ಸಂಸ್ಥೆಯ ಮೂಲಕ ಪ್ಲಗ್-ಅಂಡ್-ಪ್ಲೇ ಸೌಲಭ್ಯದ ʻಲೀಪ್ ಲ್ಯಾಬ್ಸ್ʼ ಗಳನ್ನು ಸ್ಥಾಪಿಸಲಾಗುವುದು.
• ಬೆಂಗಳೂರಿನ ಆದಿನಾರಾಯಣ ಹೊಸಹಳ್ಳಿಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ʻವಿಜ್ಞಾನ ನಗರʼ ವನ್ನು (ಸೈನ್ಸ್ ಸಿಟಿ) 233 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಇದಕ್ಕೆ ಅನುಮೋದನೆ ದೊರೆತ ನಂತರ ವಾಸ್ತುವಿನ್ಯಾಸ ತಯಾರಿಸಲು ಕ್ರಮಕೈಗೊಳ್ಳಲಾಗುವುದು.
• ಹೊಸಕೋಟೆ ತಾಲ್ಲೂಕಿನ 59 ಕೆರೆಗಳಿಗೆ ಸಂಸ್ಕರಿಸಿದ ನೀರಿನಿಂದ ಏತ ನೀರಾವರಿ ಕಲ್ಪಿಸಲಾಗುವುದು.
• ಸಣ್ಣ ನೀರಾವರಿ ಇಲಾಖೆ ವತಿಯಿಂದ ದೇವನಹಳ್ಳಿ ತಾಲ್ಲೂಕಿನ ಕಾರಹಳ್ಳಿ ಕೆರೆ ಅಭಿವೃದ್ಧಿ ಮಾಡಲಾಗುವುದು.
• ದೇವನಹಳ್ಳಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಚೆಕ್ ಡ್ಯಾಂ ಕಂ ಎಲ್.ಎಲ್.ಸಿ ನಿರ್ಮಾಣ ಹಾಗೂ ನೆಲಮಂಗಲ ತಾಲ್ಲೂಕಿನ ಹಕ್ಕಿನಾಳು ಗ್ರಾಮದಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗುವುದು.
• ಕಾರ್ಮಿಕ ಇಲಾಖೆ ವತಿಯಿಂದ ಹಂತ-1ರಲ್ಲಿ ಹೊಸಕೋಟೆಯಲ್ಲಿ ಶ್ರಮಿಕ ವಸತಿ ಶಾಲೆ ಹಾಗೂ ಹಂತ-2ರಲ್ಲಿ ದೇವನಹಳ್ಳಿ (ಗುಂಡಂಗೆರೆ ಕ್ರಾಸ್-ತೂಬಗೇರಿ ಹೋಬಳಿ)ಯಲ್ಲಿ “ಶ್ರಮಿಕ ವಸತಿ ಶಾಲೆ”ಯನ್ನು ಪ್ರಾರಂಭಿಸಲಾಗುವುದು.