ಕೆ.ಆರ್ ನಗರದಲ್ಲಿ ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಇಂದು ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಮನೆ ಕೆಲಸದಾಕೆಯ ಮೇಲಿನ ಅತ್ಯಾಚಾರ ಕೇಸ್ನಲ್ಲಿ ಪ್ರಜ್ವಲ್ ರೇವಣ್ಣಗೆ IPC 376(2)K ಅಡಿ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನ ನ್ಯಾ.ಸಂತೋಷ್ ಗಜಾನನ ಭಟ್ ಅವರು ಆದೇಶ ಹೊರಡಿಸಿದ್ದಾರೆ.

ಇಂದು ಸರ್ಕಾರದ ಪರ ವಕೀಲರಾದ ಬಿ.ಎನ್ ಜಗದೀಶ್, ಅಶೋಕ್ ನಾಯಕ್ ಪ್ರಬಲ ವಾದ ಮಂಡನೆ ಮಾಡಿದ್ದು, ಮತ್ತೊಂದೆಡೆ ಪ್ರಜ್ವಲ್ ರೇವಣ್ಣ ಪರ ವಕೀಲೆ ನಳಿನಿ ಮಾಯಾಗೌಡ ವಾದ ಮಂಡಿಸಿದ್ದಾರೆ. ವಾದ ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಇದೀಗ ಅಂತಿಮ ತೀರ್ಪು ನೀಡಿದೆ.
ಸರ್ಕಾರದ ಪರ ವಕೀಲ ಬಿ.ಎನ್ ಜಗದೀಶ್ ವಾದ : ಜೀವಕ್ಕಿಂತ ಹೆಚ್ಚಿನ ಹಾನಿ ಸಂತ್ರಸ್ತ ಮಹಿಳೆಗಾಗಿದೆ. ಒಪ್ಪಿಗೆಯಿಲ್ಲದೇ ಲೈಂಗಿಕ ಕ್ರಿಯೆಯ ಚಿತ್ರೀಕರಣ ಮಾಡಲಾಗಿದೆ. ಆಕೆಯನ್ನು ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಮಾಡಲಾಗಿದೆ. ಅತ್ಯಾಚಾರದ ರೀತಿಯು ಆತನ ವಕ್ರ ಮನಃಸ್ಥಿತಿ ತೋರಿಸುತ್ತದೆ. ಪ್ರಜ್ವಲ್ ಸಂಸದನಾಗಿದ್ದೂ ಇಂತಹ ದುಷ್ಕೃತ್ಯ ಎಸಗಿದ್ದಾನೆ. ಕಾನೂನು ತಿಳಿದಿದ್ದೂ ಇಂತಹ ನೀಚ ಕೃತ್ಯ ಎಸಗಿದ್ದಾನೆ. ಇದು ಇನ್ನೂ ಗಂಭೀರವಾದ ಅಪರಾಧ. ಈತನ ಮೇಲೆ ಈ ರೀತಿಯ ಇನ್ನಷ್ಟು ಕೇಸ್ಗಳಿವೆ. ಬಹಳಷ್ಟು ಜನರ ಅಶ್ಲೀಲ ವಿಡಿಯೋ ಮಾಡಿದ್ದಾನೆ. ವಿಡಿಯೋ ಚಿತ್ರೀಕರಿಸಿರುವುದು ಗಂಭೀರ ಅಪರಾಧ. ಗರಿಷ್ಠ ಶಿಕ್ಷೆ ವಿಧಿಸಿ, ಇತರರಿಗೆ ಅದು ಎಚ್ಚರಿಕೆಯಾಗುವಂತೆ ನೋಡಿಕೊಳ್ಳಬೇಕು. ಜೀವನಪರ್ಯಂತ ಸೆರೆವಾಸದ ಶಿಕ್ಷೆ ವಿಧಿಸಬೇಕು ಎಂದು ಬಿಎನ್ ಜಗದೀಶ್ ವಾದ ಮಂಡಿಸಿದ್ದಾರೆ.

ಸರ್ಕಾರದ ಪರ ಮತ್ತೋರ್ವ ವಕೀಲ ಅಶೋಕ್ ನಾಯಕ್ ವಾದ : ಎಸ್ಪಿಪಿ ಅಶೋಕ್ ನಾಯಕ್ ವಾದ ಮಂಡಿಸಿ, ಸಂಸದರೇ ಇಂತಹ ಕೃತ್ಯ ಮಾಡಿರುವಾಗ ಗರಿಷ್ಠ ಶಿಕ್ಷೆ ವಿಧಿಸಬೇಕು. ರಾಜಕಾರಣಿಯಾಗಿ ಕಿರಿಯ ವಯಸ್ಸಿನಲ್ಲಿ ಸಂಸದನಾಗಿದ್ದ. ಜನ ಆಯ್ಕೆ ಮಾಡಿದ್ದು ಏಕೆ? ಈತ ಮಾಡಿದ್ದೇನು? ಎಂಬುದನ್ನು ಗಮನಿಸಬೇಕು. ಈತನಿಗೆ ವಿಧಿಸುವ ಶಿಕ್ಷೆ ಸಮಾಜಕ್ಕೆ ಸಂದೇಶವಾಗಬೇಕು. ಜೀವಾವಧಿ ಶಿಕ್ಷೆ, ಜೊತೆಗೆ ಅತಿ ಹೆಚ್ಚು ದಂಡನೆ ವಿಧಿಸಬೇಕು. ಒಂದು ಕೇಸ್ನಲ್ಲಿ 25 ಲಕ್ಷ ರೂ. ದಂಡ ವಿಧಿಸಿದ ಉದಾಹರಣೆ ಇದೆ. ಪ್ರಜ್ವಲ್ ಬಡವನಲ್ಲ, ಕರೋಡ್ ಪತಿಯಾಗಿದ್ದಾನೆ. ಹೀಗಾಗಿ ಹೆಚ್ಚಿನ ದಂಡ ವಿಧಿಸಿ ಅದರ ದೊಡ್ಡ ಭಾಗವನ್ನು ಸಂತ್ರಸ್ತೆಗೆ ನೀಡಬೇಕು. ವಿಡಿಯೋ ವೈರಲ್ ಆಗಿರುವುದರಿಂದ ಆಕೆ ದುಡಿಯಲು ಎಲ್ಲೂ ಹೋಗದಂತಾಗಿದೆ. ಇದರಿಂದ ಆಕೆಗೂ ಪರಿಹಾರದ ಅಗತ್ಯವಿದೆ ಎಂದು ಅಶೋಕ್ ನಾಯಕ್ ವಾದಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಪರ ನಳಿನಿ ಮಾಯಾಗೌಡ ವಾದ : ಪ್ರಜ್ವಲ್ ರೇವಣ್ಣ ಪರ ವಾದ ಮಂಡಿಸಿದ ವಕೀಲೆ ನಳಿನಿ ಮಾಯಾಗೌಡ, ಎಸ್ಪಿಪಿಗಳು ಸಮಾಜಕ್ಕೆ ಸಂದೇಶ ನೀಡಬೇಕೆಂದು ವಾದ ಮಂಡಿಸಿದ್ದಾರೆ. ಯುವ ಸಂಸದನಾಗಿ ಪ್ರಜ್ವಲ್ ಜನಸೇವೆ ಮಾಡಿದ್ದಾನೆ. ಹಣ ಮಾಡಲೆಂದು ಆತ ರಾಜಕಾರಣಕ್ಕೆ ಸೇರಿಲ್ಲ. 2024ರ ಚುನಾವಣೆ ವೇಳೆಯೇ ವಿಡಿಯೋಗಳನ್ನು ಏಕೆ ವೈರಲ್ ಮಾಡಲಾಯಿತು? ಇದು ಪ್ರಜ್ವಲ್ ವಿರುದ್ಧ ರಾಜಕೀಯ ಪ್ರೇರಿತ ಕ್ರಮವಾಗಿದೆ. ಆರೋಪಿಯ ರಾಜಕೀಯ ಸ್ಥಾನಮಾನ ಶಿಕ್ಷೆಗೆ ಕಾರಣವಾಗಬಾರದು. ಹಾಗೆ ಮಾಡಿದರೆ, ಇಷ್ಟು ದಿನದ ಒಳ್ಳೆ ಹೆಸರು ಏನಾಗಬೇಕು ಎಂದು ಪ್ರಶ್ನಿಸಿದ್ದಾರೆ.
ಇನ್ನು, ಪ್ರಜ್ವಲ್ ಯುವಕನಾಗಿದ್ದು ಆತನ ಭವಿಷ್ಯವನ್ನೂ ಗಮನದಲ್ಲಿಡಬೇಕು. ಈಗಾಗಲೇ ಮಾಧ್ಯಮಗಳಲ್ಲಿ ಆತನ ತೇಜೋವಧೆಯಾಗಿದೆ. ಬಂಧನವಾದ ದಿನದಿಂದಲೂ ಜೈಲಿನಲ್ಲಿದ್ದಾನೆ. ಆತನಿಗೆ ವಯಸ್ಸಾದ ತಂದೆ ತಾಯಿ ಇದ್ದಾರೆ. ತಾತ ಮಾಜಿ ಪ್ರಧಾನಿಯಾಗಿದ್ದಾರೆ. ಆತನ ರಾಜಕೀಯ ಸ್ಥಾನಮಾನ ತೀವ್ರ ಶಿಕ್ಷೆಗೆ ಕಾರಣವಾಗಬಾರದು. ಚುನಾವಣೆ ಗೆಲ್ಲುವ ವೇಳೆಯೇ ಇಂತಹ ವಿಡಿಯೋ ಹರಿಬಿಡಲಾಗಿದೆ ಎಂಬುದನ್ನೂ ಗಮನಿಸಬೇಕು. ಸಂತ್ರಸ್ತೆಗಿಂತ ಅಪರಾಧಿಗೇ ಹೆಚ್ಚಿನ ಹಾನಿಯಾಗಿದೆ ಎಂದು ನಳಿನಿ ಮಾಯಾಗೌಡ ವಾದಿಸಿದರು. ಆದರೆ, ಇದಕ್ಕೆ ಪ್ರಾಸಿಕ್ಯೂಷನ್ ಪರ ವಕೀಲ ಬಿಎನ್ ಜಗದೀಶ್ ಆಕ್ಷೇಪ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣ ಮೇಲೆ ಇನ್ನೂ ಇದೆ 3 ಕೇಸ್ : ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರವೆಸಗಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿರುವ ಆರೋಪ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳು ಇನ್ನೂ ವಿಚಾರಣಾ ಹಂತದಲ್ಲಿ ಇವೆ. ಇವುಗಳ ತೀರ್ಪು ಇನ್ನಷ್ಟೇ ಹೊರಬೀಳಬೇಕಿದೆ.
2024ರ ಮೇ 31ರಂದು ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಕಳೆದ 14 ತಿಂಗಳಿನಿಂದ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ. ನಾಲ್ಕು ಪ್ರಕರಣಗಳಲ್ಲಿ ಕೆ.ಆರ್ ನಗರ ಕೇಸ್ನಲ್ಲಿ ಪ್ರಜ್ವಲ್ ದೋಷಿಯಾಗಿದ್ದು, ಇದೀಗ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಶಿಕ್ಷೆ ಪ್ರಮಾಣ ಪ್ರಕಟಿಸಿದೆ.

ಇನ್ನುಳಿದಂತೆ ಹೊಳೆನರಸೀಪುರ, ಹಾಸನ ಅತ್ಯಾಚಾರ ಪ್ರಕರಣದ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ವಿಚಾರಣೆ ಹಂತದಲ್ಲಿದೆ. ಇನ್ನು ವಿಡಿಯೋ ಕಾಲ್ ಮೂಲಕ ಕಿರುಕುಳ ನೀಡಿದ್ದ ಐಟಿ ಆ್ಯಕ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿವೆ. ಈ ಮೂರು ಕೇಸ್ನಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಯಾವ ತೀರ್ಪು ನೀಡಲಿದೆ ಎನ್ನುವುದನ್ನು ಕಾದುನೋಡಬೇಕಿದೆ.