
ಹೌದು, ಸಹಪ್ರಯಾಣಿಕನ ಟ್ರಾಲಿಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಕೆಜಿಗಟ್ಟಲೆ ಚಿನ್ನ ಇಟ್ಟು ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದ್ದು, 3.5 ಕೆಜಿಯಷ್ಟು ಚಿನ್ನದ ಬಿಸ್ಕೆಟ್ ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಸ್ಮಗ್ಲರ್ ಬರೋಬ್ಬರಿ 3.5 ಕೆಜಿ ಚಿನ್ನದ ಬಿಸ್ಕೆಟ್ಗಳಿದ್ದ ಬ್ಯಾಗ್ ಇಟ್ಟು ಹೋಗಿದ್ದ. ಟ್ರಾಲಿ ತಳ್ಳಿಕೊಂಡು ಚೆಕ್ಕಿಂಗ್ ಕಡೆ ಬರುವಾಗ ಟ್ರಾಲಿ ಬ್ಯಾಗ್ನಿಂದ ಚಿನ್ನ ಹೊರಗಡೆ ಬಿದ್ದಿದೆ. ತನ್ನ ಟ್ರಾಲಿಯಲ್ಲಿ ಚಿನ್ನದ ಬ್ಯಾಗ್ ಕಂಡು ಪ್ರಯಾಣಿಕ ಕಂಗಾಲಾಗಿದ್ದಾನೆ. ಕೂಡಲೇ ಪ್ರಯಾಣಿಕ ಚಿನ್ನದ ಬ್ಯಾಗ್ ಸಮೇತ ಏರ್ಪೋರ್ಟ್ ಭದ್ರತಾ ಪಡೆಗೆ ಮಾಹಿತಿ ನೀಡಿದ್ದಾನೆ. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಕೋಟಿ ಕೋಟಿ ಬೆಲೆ ಬಾಳುವ 3.5 ಕೆಜಿ ಚಿನ್ನ ಪತ್ತೆಯಾಗಿದೆ.

ಕಸ್ಟಮ್ಸ್ ಅಧಿಕಾರಿಗಳು ಟ್ರಾಲಿ ಬ್ಯಾಗ್ ಪ್ರಯಾಣಿಕನಿಂದ ಮಾಹಿತಿ ಪಡೆದು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದು, ಮೆಲ್ನೋಟಕ್ಕೆ ದುಬೈನಿಂದ ಬಂದಿದ್ದ ವ್ಯಕ್ತಿಯೇ ಚಿನ್ನ ಬಿಟ್ಟು ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ.