
ಢಾಕಾ : ಬಾಂಗ್ಲಾದೇಶದ ವಾಯುಪಡೆಯ F-7 BGI ತರಬೇತಿ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದು, ಈ ಘಟನೆಯಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಮತ್ತು 70 ಮಂದಿ ಗಾಯಗೊಂಡಿದ್ದಾರೆ.
ಢಾಕಾದ ಉತ್ತರದಲ್ಲಿರುವ ಮೈಲ್‌ಸ್ಟೋನ್ ಶಾಲೆ ಮತ್ತು ಕಾಲೇಜು ಕಟ್ಟಡಕ್ಕೆ ಚೀನಾ ನಿರ್ಮಿತ ಎಫ್-7 ಜೆಟ್ ಅಪ್ಪಳಿಸಿದೆ. ತರಗತಿಗಳು ನಡೆಯುತ್ತಿರುವಾಗ ಅಪಘಾತ ಸಂಭವಿಸಿದ್ದು, ಅಪಘಾತದ ಸ್ಥಳದಿಂದ ಬೆಂಕಿ ಮತ್ತು ಕಪ್ಪು ಹೊಗೆ ಆವರಿಸಿಕೊಂಡಿದೆ. ರಕ್ಷಣಾ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸುತ್ತಿದ್ದಾರೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮತ್ತು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ವಿದ್ಯಾರ್ಥಿಗಳು, ಅವ್ಯವಸ್ಥೆಯ ನಡುವೆ ದಿಕ್ಕಾಪಾಲಾಗಿದ್ದಾರೆ.
ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಸೇನಾ ಪಡೆಗಳು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದು, ಪರಿಶೀಲನೆ ಹಾಗೂ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿಯಲು ವಿಶೇಷ ತನಿಖಾ ತಂಡ ರಚಿಸಲಾಗಿದೆ.