ರಾಜೀನಾಮೆ ನೀಡುವ ವಿಚಾರವಾಗಿ ಅಧ್ಯಕ್ಷ ಮತ್ತು ಸದಸ್ಯರ ನಡುವೆ ನಡು ರಸ್ತೆಯಲ್ಲಿ ಕಾಳಗ ನಡೆದಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರುಗಡೆಯ ರಸ್ತೆಯಲ್ಲಿ ಬಡಿದಾಟ ನಡೆದಿದೆ.

ನೆಲಮಂಗಲ ತಾಲ್ಲೂಕಿನ ಅರೆಬೊಮ್ಮನಹಳ್ಳಿ ಗ್ರಾಪಂ ಸದಸ್ಯರು ಹಾಗೂ ಅಧ್ಯಕ್ಷರು ರಾಜೀನಾಮೆ ನೀಡಲು ಒಟ್ಟಿಗೆ ದೊಡ್ಡಬಳ್ಳಾಪುರದ ಎಸಿ ಕಚೇರಿಗೆ ಬಂದಿದ್ದಾರೆ. ಈ ವೇಳೆ ಅಧ್ಯಕ್ಷ ರಾಜೀನಾಮೆ ನೀಡುವುದಿಲ್ಲ ಎಂದಿದ್ದಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಇದು ವಿಕೋಪಕ್ಕೆ ತಿರುಗಿ ಅಧ್ಯಕ್ಷ ಶರ್ಟ್ ನ್ನು ಕಿತ್ತು ಹಾಕಿ ನಡು ರಸ್ತೆಯಲ್ಲಿಯೇ ಬಡಿದಾಡಿಕೊಂಡಿದ್ದಾರೆ. ಮತದಾರರು ತಮ್ಮ ಅಮೂಲ್ಯವಾದ ಮತ ನೀಡಿ ಗ್ರಾಮ ಅಭಿವೃದ್ಧಿ ಮಾಡಲೆಂದು ಸದಸ್ಯರನ್ನು ಆಯ್ಕೆ ಮಾಡಿ ಕಳಿಸಿರುತ್ತಾರೆ. ಆದರೆ ಆಯ್ಕೆಯಾದ ಜನಪ್ರತಿನಿಧಿಗಳು ಅಧಿಕಾರದ ಆಸೆಗೆ ಬೀದಿಯಲ್ಲಿ ಬಡಿದಾಡಿಕೊಂಡಿದ್ದು ನಗೆಪಾಟಲಿಗೀಡು ಮಾಡಿದೆ.
ಇನ್ನು ಹಲ್ಲೆಗೊಳಗಾದ ವ್ಯಕ್ತಿ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.