
ಇಂದಿನ ದಿನಗಳಲ್ಲಿ ಹವಾಮಾನ ವೈಪರೀತ್ಯ, ಪೌಷ್ಟಿಕಾಂಶ ಆಹಾರ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಜಾನುವಾರುಗಳು ಸರಿಯಾದ ಸಮಯಕ್ಕೆ ಗರ್ಭ ಧರಿಸದೆ ಕರುಗಳನ್ನು ಹಾಕುವ ಸಂದರ್ಭಗಳಲ್ಲಿ ಸಹ ಏರು ಪೇರಾಗಿ ಸಮರ್ಪಕವಾಗಿ ಹಾಲು ನೀಡಲು ವಿಫಲವಾಗುತ್ತಿವೆ. ಅಂತದ್ದರಲ್ಲಿ ಇಲ್ಲೊಂದು ಹಸು ಗರ್ಭ ಧರಿಸದೆ ಕರು ಹಾಕದೆಯೇ ದಿನಕ್ಕೆ 4 ಲೀಟರ್ ಹಾಲು ನೀಡುವುದರ ಮೂಲಕ ಎಲ್ಲರನ್ನು ಆಶ್ಚರ್ಯ ಚಕಿತರನ್ನಾಗಿಸಿದೆ.
ಹೌದು, ಮಂಡ್ಯ ಜಿಲ್ಲೆಯ, ಮಂಡ್ಯ ತಾಲ್ಲೂಕಿನ ತಿಮ್ಮನ ಹೊಸೂರು ಗ್ರಾಮದಲ್ಲಿ ಈ ಘಟನೆ ನಡೆಯುತ್ತಿದೆ. ಗ್ರಾಮದ ಪುಟ್ಟಸ್ವಾಮಿ ಎಂಬುವವರಿಗೆ ಸೇರಿದ ಹಸು ಇದಾಗಿದ್ದು, ಕಳೆದ ಎರಡು ತಿಂಗಳಿನಿಂದ ಬೆಳಿಗ್ಗೆ 2 ಲೀಟರ್ ಹಾಗೂ ಸಂಜೆ 2 ಲೀಟರ್ ಹಾಲು ನೀಡುತ್ತಿದೆಯಂತೆ.
ಈ ಹಸುವಿನ ಕೆಚ್ಚಲಿನಲ್ಲಿ ಇದ್ದಕ್ಕಿದ್ದಂತೆ ಹಾಲು ಬರಲು ಪ್ರಾರಂಭವಾಯಿತಂತೆ. ಇದನ್ನು ಗಮನಿಸಿದ ಪುಟ್ಟಸ್ವಾಮಿ ವೈದ್ಯರನ್ನು ಸಂಪರ್ಕಿಸಿದ್ದಾರೆ. ವೈದ್ಯರು ಇದು ಹಾರ್ಮೋನ್ ಗಳ ವ್ಯತ್ಯಾಸ ದಿಂದ ಕೋಟಿಯಲ್ಲಿ ಒಂದು ಹಸುವಿನಲ್ಲಿ ಈ ರೀತಿಯಾಗುತ್ತಿದ್ದು, ಹಸುವಿನಲ್ಲಿ ಪ್ರತಿನಿತ್ಯ ಹಾಲು ಕರೆಯುವಂತೆ ಸಲಹೆ ನೀಡಿದ್ದಾರೆ. ಈ ಚಮತ್ಕಾರಿ ಹಸುವನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಮುಗಿಬೀಳುತ್ತಿದ್ದಾರೆ.