ಹಣಕಾಸಿನ ವಿಚಾರಕ್ಕೆ ಸಂಬಂಧಿಗಳ ಮಧ್ಯೆ ಕಿರಿಕ್ ನಡೆದಿದ್ದು, ಇದರಿಂದ ಕೋಪಗೊಂಡ ಸಂಬಂಧಿಯೋರ್ವ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿದ್ದಾನೆ. ಈತ ಮಾಡಿದ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಭಯಾನಕ ಸನ್ನಿವೇಶ ನೊಡಿ ಸ್ವತಃ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ಅಂದಹಾಗೆ ಈ ಘಟನೆ ಜುಲೈ 1 ರಂದು ವಿವೇಕನಗರದಲ್ಲಿ ನಡೆದಿದ್ದು, ವೆಂಕಟರಮಣಿ ಮತ್ತು ಪುತ್ರ ಸತೀಶ್ ಇದ್ದ ಮನೆಗೆ ಇವರ ಸಂಬಂಧಿ ಸುಬ್ರಮಣಿ ಎಂಬಾತ ಬೆಂಕಿ ಹಾಕಿದ್ದಾನೆ. ಕಳೆದ ಏಳು ವರ್ಷದ ಹಿಂದೆ ಇಬ್ಬರು ಮನೆಯವರಿಗೆ ದುಡ್ಡಿನ ವಿಚಾರವಾಗಿ ವ್ಯವಹಾರ ನಡೆದಿದೆ. ವೆಂಕಟರಮಣಿ ಎಂಬುವವರು ಸುಬ್ರಮಣಿ ಅಕ್ಕ ಪಾರ್ವತಿಗೆ ಸಾಲ ನೀಡಿದ್ದು, ಇದನ್ನು ಕೇಳುವ ವಿಚಾರವಾಗಿ ಗಲಾಟೆ ನಡೆದಿದೆ.
ಇದರಿಂದ ಕೋಪಗೊಂಡ ಪಾರ್ವತಿ ಸುಬ್ರಮಣಿಯಿಂದ ಮನೆಗೆ ಬೆಂಕಿ ಹಾಕಿಸಿದ್ದಾಳೆ. ಈ ವೇಳೆ ಮನೆಯಲ್ಲಿದ್ದ ವೆಂಕಟರಮಣಿ ಬೆಂಕಿ ಕಂಡು ಕೂಗಿಕೊಂಡಿದ್ದಾರೆ. ಸ್ಥಳೀಯರು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿ ಪ್ರಾಣ ರಕ್ಷಣೆ ಮಾಡಿದ್ದಾರೆ. ಬೆಂಕಿಗೆ ಮನೆಯ ಮುಂಭಾಗದಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿವೆ. ಈ ಸಂಬಂಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.