
ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರೇವಾ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ “ಸಂಸ‌್ಥಾಪನಾ ದಿನಾಚರಣೆ” ಆಯೋಜಿಸಲಾಗಿತ್ತು. ರೇವಾ ವಿ.ವಿ. ಕುಲಪತಿ ಡಾ.ಪಿ. ಶ್ಯಾಮ ರಾಜು ಅವರ ಜನ್ಮದಿನದ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು. ಭಾರತೀಯ ವಾಯು ಸೇನೆ ಮಾಜಿ ಚೀಫ್ ಆಫ್ ಏರ್ ಸ್ಟಾಫ್ ಏರ್ ಚೀಫ್ ಮಾರ್ಷಲ್ ಫಾಲಿ ಎಚ್. ಮೇಜರ್, ಭಾರತೀಯ ರಾಜತಾಂತ್ರಿಕರು, ಮಾಜಿ ವಿದೇಶಾಂಗ ಕಾರ್ಯದರ್ಶಿ, ರಾಯಭಾರಿ ನಿರುಪಮಾ ಮೆನನ್ ರಾವ್, ನಟಿ ಜಯಸುಧಾ ಇವರೆಲ್ಲರಿಗೂ ಪ್ರತಿಷ್ಠಿತವಾದ ರೇವಾ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆಂಧ್ರಪ್ರದೇಶದ ಸಣ್ಣ ಹಳ್ಳಿಯೊಂದರಲ್ಲಿ ಬೆಳೆದು, ರೇವಾ ವಿಶ್ವವಿದ್ಯಾಲಯದ ಸ್ಥಾಪನೆ ಮಾಡುವ ತನಕ ತಮ್ಮ ಸ್ಫೂರ್ತಿಯುತ ಪ್ರಯಾಣದ ಬಗ್ಗೆ ಡಾ. ಪಿ.ಶ್ಯಾಮರಾಜು ಅವರು ಮಾತನಾಡಿದರು. ಉತ್ಕೃಷ್ಟತೆ ಹಾಗೂ ಸೇವೆಯನ್ನು ಸಂಭ್ರಮಿಸುವ ವಾರ್ಷಿಕ ಸಂಪ್ರದಾಯವಾಗಿ ಹೇಗೆ ಸಂಸ್ಥಾಪನಾ ದಿನಾಚರಣೆ ಬದಲಾವಣೆ ಆಯಿತು ಎಂಬ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.
“ಮೌಲ್ಯಗಳು, ಶಿಸ್ತು, ಕಠಿಣ ಪರಿಶ್ರಮ, ಹಿರಿಯರಿಗೆ ಗೌರವ ನೀಡುವುದು ಮತ್ತು ಸವಾಲುಗಳನ್ನು ಧೈರ್ಯದಿಂದ ಎದುರಿಸುವುದು ಈ ಎಲ್ಲವೂ ನಿಜವಾಗಲೂ ನನ್ನನ್ನು ಸುಸ್ಥಿರಗೊಳಿಸಿದೆ. ಈ ಎಲ್ಲ ಗುಣಗಳನ್ನು ವಿದ್ಯಾರ್ಥಿಗಳು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಇನ್ನು ನನ್ನ ಪಾಲಿಗೆ ಈ ಎಲ್ಲವೂ ಶಿಕ್ಷಣದ ನಿಜವಾದ ಸಾರವಾಗಿದೆ,” ಎಂದು ಅವರು ಹೇಳಿದರು.
ವೃತ್ತಿಜೀವನ ರೂಪಿಸಿದ ಸಿದ್ಧಾಂತದ ಪ್ರತಿಫಲನ:
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಫಾಲಿ ಹೋಮಿ ಮೇಜರ್ ಹೃದಯ ತುಂಬಿದ ಧನ್ಯವಾದ ಹೇಳಿದರು. ಈ ಪ್ರಶಸ್ತಿಯು ವಿಶಿಷ್ಟ ವೃತ್ತಿಜೀವನವು ರೂಪಿಸಿದ ಸಿದ್ಧಾಂತಗಳ ಪ್ರತಿಫಲನ. ನಾನು ಏನೆಲ್ಲ ಸಾಧಿಸಿದ್ದೇನೋ ಅದರ ಮೂಲವಿರುವುದು ವೃತ್ತಿಪರತೆ, ರಾಜೀ ಇಲ್ಲದ ಬದ್ಧತೆ, ಮತ್ತು ನಿರಂತರವಾದ ಕಠಿಣ ಪರಿಶ್ರಮದಲ್ಲಿ ಎಂದರು. ನಾಯಕತ್ವದ ಬಗ್ಗೆ ಒತ್ತು ನೀಡಿ ಹೇಳಿದ ಅವರು, ನಿಜವಾದ ದೃಷ್ಟಿಕೋನದ ಬೇರು ಇರುವುದು ಧೈರ್ಯ, ಬದ್ಧತೆ ಹಾಗೂ ದೃಢವಾದ ಯತ್ನದಲ್ಲಿ ಎಂದು ಹೇಳಿದರು.
ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರತಿಯೊಬ್ಬರು ಪರಿಶ್ರಮ ಹಾಕಬೇಕಾದ ಮೂರು ಮುಖ್ಯ ಪಾಠಗಳ ಬಗ್ಗೆ ಗಮನವನ್ನು ಸೆಳೆದರು. ಮೊದಲನೆಯದು ಶಿಸ್ತು. ಇದು ಯಾವತ್ತಿಗೂ ಮಿತಿ ಅಲ್ಲ, ಆದರೆ ಸ್ವಾತಂತ್ರ್ಯದ ಮೂಲವಿದು. ಎರಡನೆಯದು ಸಮಗ್ರತೆ. ಇದು ರಾಜೀ ಮಾಡಿಕೊಳ್ಳಲು ಸಾಧ್ಯವಿಲ್ಲದ್ದು ಎಂದು ವ್ಯಾಖ್ಯಾನಿಸಿದರು. ಇನ್ನು ಮೂರನೆಯದು ಕೆಲಸದ ಮೂಲಕವಾಗಿ ಸಕಾರಾತ್ಮಕವಾದ ಬದಲಾವಣೆಯನ್ನು ತರುವುದು. “ನಾವೀನ್ಯತೆ, ಉತ್ಕ್ರಷ್ಟತೆಗಾಗಿ ಪರಿಶ್ರಮ ಮತ್ತು ವಿನಮ್ರರಾಗಿರಿ ಹಾಗೂ ಯಾವಾಗಲೂ ದೇಶಕ್ಕಾಗಿ ವಾಪಸ್ ನೀಡಿ,” ಎಂದು ಸಲಹೆ ಮಾಡಿದರು.

ವಿಶ್ವವಿದ್ಯಾಲಯಗಳ ಸೃಷ್ಟಿ ಆಕಸ್ಮಿಕವಲ್ಲ:
ನಿರುಪಮಾ ರಾವ್ ಅವರು ಮಾತನಾಡಿ, ವಿಶ್ವವಿದ್ಯಾಲಯಗಳು ಆಕಸ್ಮಿಕವಾಗಿ ಯಾವತ್ತಿಗೂ ಸೃಷ್ಟಿ ಆಗುವುದಿಲ್ಲ. ಅದು ಕಲಿಕೆಯ ದೇವಾಲಯ. ಒಟ್ಟಾತೆ ನಂಬಿಕೆಯ ಕಾರ್ಯವಿದು. ಶಿಕ್ಷಣ ಕೇವಲ ವೃತ್ತಿಪರ ಗುರಿ ರೂಪಿಸಿದರಷ್ಟೇ ಸಾಲದು. ಆಳವಾದ ಜವಾಬ್ದಾರಿ ಸಹ ಕಲಿಸಬೇಕು. ಶಿಕ್ಷಣ ಒಂದು ವ್ಯವಹಾರವಾಗಿ ಅಲ್ಲದೆ, ಪವಿತ್ರ ಯಾತ್ರೆಯ ರೀತಿಯಲ್ಲಿ ಪರಿಗಣಿಸಬೇಕು ಎಂದರು.
ಸಮಕಾಲೀನ ಸಂದರ್ಭದ ಬಗ್ಗೆ ಹೇಳುತ್ತಾ, ನಾಯಕತ್ವದ ಬಗೆಗಿನ ಆತಂಕದ ಸಂದರ್ಭದಲ್ಲಿ ನಾವು ಬದುಕುತ್ತಿದ್ದೇವೆ, ಹಾಗಾಗಿ ಚಿಂತನಶೀಲ ನಾಯಕತ್ವವು ಎಂದಿಗಿಂತಲೂ ಹೆಚ್ಚು ಅತ್ಯಗತ್ಯವಾಗಿದೆ ಎಂದರು. ಸಾರ್ವಜನಿಕ ಸೇವೆಯಲ್ಲಿನ ತಮ್ಮ ವರ್ಷಗಳ ಅನುಭವವನ್ನು ಸ್ಮರಿಸುತ್ತಾ, “ನಾಯಕತ್ವವು ನಾವು ಊಹಿಸುವುದಕ್ಕಿಂತ ನಿಶ್ಯಬ್ದವಾದುದು ಎಂದು ನಾನು ಕಲಿತಿದ್ದೇನೆ. ಇದು ಹೆಚ್ಚು ಶ್ರಮದಾಯಕವಾದುದು. ನಾಯಕತ್ವ ಎಂದರೆ ಒಂದು ಕೊಠಡಿಯನ್ನು ಆವರಿಸುವುದು ಅಲ್ಲ, ಬದಲಿಗೆ ಅದನ್ನು ಹಿಡಿದಿಟ್ಟುಕೊಳ್ಳುವುದು—ಗಮನವಿಟ್ಟು ಆಲಿಸುವುದು, ಸಂದರ್ಭವನ್ನು ಅರಿಯುವುದು, ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಕ್ರಿಯೆಗಿಂತ ಸಂಯಮವೇ ಯಾವಾಗ ಬುದ್ಧಿವಂತಿಕೆ ಎಂಬುದನ್ನು ತಿಳಿಯುವುದು,” ಎಂದು ಅವರು ಹೇಳಿದರು.
ನಾಯಕತ್ವ ಸ್ಥಾನದಲ್ಲಿ ಮಹಿಳೆಯರು:
ಒಬ್ಬ ನಾಯಕತ್ವ ಸ್ಥಾನದಲ್ಲಿ ಇರುವ ಮಹಿಳೆಯಾಗಿ ತಮ್ಮ ಪ್ರಯಾಣದ ಬಗ್ಗೆ ಮುಕ್ತವಾಗಿ ಮಾತನಾಡಿದ ಅವರು, ಗಾಜಿನ ಛಾವಣಿಗಳನ್ನು ಒಡೆಯುವ ಮತ್ತು ಅಧಿಕಾರ ರಚನೆಗಳಲ್ಲಿ ಸಾಗುವ ವಾಸ್ತವಗಳ ಬಗ್ಗೆ ಪ್ರಸ್ತಾಪಿಸಿದರು. “ಹೆಚ್ಚಿನ ಮಹಿಳೆಯರಿಗೆ ಹಾದಿಯು ಒಂದು ಸಾಲಿನಲ್ಲಿ ಸಾಗುವಂತಾಗಿದ್ದು, ನಿರೀಕ್ಷೆಗಳು ಮತ್ತು ಕಣ್ಣಿಗೆ ಕಾಣದ ನಿಯಮಗಳೊಂದಿಗೆ ನಿರಂತರ ಸಂಧಾನವನ್ನು ಒಳಗೊಂಡಿರುತ್ತದೆ—ಅದು ಕೂಡ ಆ ಜಾಗವನ್ನು ಪ್ರವೇಶಿಸುವ ಮೊದಲೇ ಪ್ರಾರಂಭವಾಗಿರುತ್ತದೆ,” ಎಂದು ಅವರು ಹೇಳಿದರು. “ಏಕೆಂದರೆ ನಾವು ವಿನಾಯಿತಿ ಅಥವಾ ಸವಲತ್ತನ್ನು ಬಯಸುತ್ತೇವೆ ಎಂದಲ್ಲ, ಬದಲಿಗೆ ಸಮಾಜವು ಪ್ರತಿಭೆಯನ್ನು ವ್ಯರ್ಥ ಮಾಡಲು ಸಾಧ್ಯವಿಲ್ಲದ ಕಾರಣಕ್ಕಾಗಿ ಮಹಿಳೆಯರು ಪಟ್ಟು ಹಿಡಿಯುತ್ತಾರೆ,” ಎಂದರು.
ನಾಯಕತ್ವದಲ್ಲಿ ಮಹಿಳೆಯರನ್ನು ಬದಿಗೊತ್ತುವುದು ಅನ್ಯಾಯವಷ್ಟೇ ಅಲ್ಲ, ಅದು ಅಸಮರ್ಥತೆಯೂ ಹೌದು. ಮಹಿಳೆಯರು ನಾಯಕತ್ವಕ್ಕೆ ತರುವುದು ಮೃದುತ್ವ ಅಥವಾ ಭಾವನಾತ್ಮಕತೆಯನ್ನಲ್ಲ, ಬದಲಿಗೆ ಆಳವಾದ ದೃಷ್ಟಿಕೋನವನ್ನು—ಪರಿಣಾಮಗಳ ಬಗ್ಗೆ ತೀವ್ರ ಸಂವೇದನೆ ಮತ್ತು ಅಧಿಕಾರವು ಯಾವಾಗಲೂ ಮಾನವೀಯ ವೆಚ್ಚಗಳನ್ನು ಹೊಂದಿರುತ್ತದೆ ಎಂಬ ಸ್ಪಷ್ಟ ತಿಳಿವಳಿಕೆಯನ್ನು ಎಂದು ಹೇಳಿ ತಮ್ಮ ಭಾಷಣ ಮುಕ್ತಾಯ ಮಾಡಿದರು.
ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಜಯಸುಧಾ ಅವರು, ಇತರ ಗಣ್ಯ ವ್ಯಕ್ತಿಗಳೊಂದಿಗೆ ಪ್ರಶಸ್ತಿ ಸ್ವೀಕರಿಸುತ್ತಿರುವುದು ಗೌರವ ತರುವಂಥದ್ದು ಎಂದು ಹೇಳಿದರು. ಸಿನಿಮಾದಲ್ಲಿನ ತಮ್ಮ ಪಯಣವನ್ನು ನೆನಪಿಸಿಕೊಳ್ಳುತ್ತಾ, ನಟಿಸಿದ ಪ್ರತಿ ಚಿತ್ರವೂ ಪ್ರೇಕ್ಷಕರು ಮತ್ತು ಹಿತೈಷಿಗಳಿಗೆ ತಾವು ಹೊಂದಿರುವ ಜವಾಬ್ದಾರಿಯನ್ನು ನೆನಪಿಸುತ್ತದೆ. ನಿಜವಾದ ಶ್ರೇಷ್ಠತೆಯು ಸಮಗ್ರತೆ, ಪರಿಶ್ರಮ ಮತ್ತು ಅಚಲವಾದ ಬದ್ಧತೆಯಲ್ಲಿ ಅಡಗಿದೆ ಎಂಬ ತಮ್ಮ ನಂಬಿಕೆಯನ್ನು ಈ ಕ್ಷಣವು ಮತ್ತೆ ಹೇಳುತ್ತೇನೆ ಎಂದು ಅವರು ತಿಳಿಸಿದರು.
ರಿಯಾ ಎಐ- ಚಾಲಿತ ಹ್ಯೂಮನಾಯ್ಡ್ ಅನಾವರಣ:
ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ರೇವಾ (REVA) ವಿಶ್ವವಿದ್ಯಾಲಯವು ‘ರಿಯಾ’ (RIA – REVA Intelligent Assistant) ಅನ್ನು ಅನಾವರಣಗೊಳಿಸಿತು. ಇದು ರೇವಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಆಂತರಿಕವಾಗಿ ಅಭಿವೃದ್ಧಿಪಡಿಸಿದ ಎಐ-ಚಾಲಿತ ಹ್ಯೂಮನಾಯ್ಡ್ ಆಗಿದ್ದು, ವಿಶ್ವವಿದ್ಯಾಲಯದ ನಾವೀನ್ಯತೆ ಆಧಾರಿತ ಶೈಕ್ಷಣಿಕ ಪಯಣದಲ್ಲಿ ಮಹತ್ವದ ಮೈಲುಗಲ್ಲು ಇದು ಎಂದೆನಿಸಿದೆ.
ಉದ್ಯಮದ ನಾಯಕರು, ಹಿರಿಯ ನಾಯಕತ್ವ, ಅಧ್ಯಾಪಕರು, ವಿದ್ಯಾರ್ಥಿಗಳು, ಪೋಷಕರು ಮತ್ತು ಅತಿಥಿಗಳ ಸಮ್ಮುಖದಲ್ಲಿ ಕುಲಪತಿ ಡಾ.ಪಿ. ಶ್ಯಾಮ ರಾಜು ಈ ಹ್ಯೂಮನಾಯ್ಡ್ ಅನ್ನು ಅನಾವರಣಗೊಳಿಸಿದರು. ಸ್ಮಾರ್ಟ್ ಕ್ಯಾಂಪಸ್ ಸಹಾಯಕ ಆಗಿ ವಿನ್ಯಾಸಗೊಳಿಸಲಾದ ‘ರಿಯಾ’, ಸಂದರ್ಶಕರನ್ನು ಸ್ವಾಗತಿಸುತ್ತದೆ, ಶಿಕ್ಷಣ, ಪ್ರವೇಶ ಮತ್ತು ಸೌಲಭ್ಯಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸುತ್ತದೆ, ಡಿಜಿಟಲ್ ಕ್ಯಾಂಪಸ್ ನ್ಯಾವಿಗೇಷನ್ ನೀಡುತ್ತದೆ ಮತ್ತು ಮಾರ್ಗಗಳು ಹಾಗೂ ಮಾಹಿತಿ ಡೌನ್‌ಲೋಡ್‌ಗಳಿಗಾಗಿ ಕ್ಯೂಆರ್ (QR) ಕೋಡ್‌ಗಳನ್ನು ಹಂಚಿಕೊಳ್ಳುವ ಮೂಲಕ ಸಂದರ್ಶಕರ ಅನುಭವವನ್ನು ಮತ್ತೂ ಉತ್ತಮಗೊಳಿಸುತ್ತದೆ.
ರೇವಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆಯ ಅಧ್ಯಕ್ಷತೆಯನ್ನು ಕುಲಪತಿ ಡಾ. ಪಿ. ಶ್ಯಾಮರಾಜು ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರೊ-ಚಾನ್ಸಲರ್ ಉಮೇಶ್ ಎಸ್. ರಾಜು, ಉಪಕುಲಪತಿ ಡಾ. ಸಂಜಯ್ ಆರ್. ಚಿಟ್ನಿಸ್, ಕುಲಸಚಿವ ಡಾ. ಎಂ. ಧನಂಜಯ, ಕುಟುಂಬದ ಸದಸ್ಯರು, ಟ್ರಸ್ಟಿಗಳು, ಅಧ್ಯಾಪಕರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.