ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಬೂದಿಗೆರೆ ಗ್ರಾಮದ ಬೈಪಾಸ್ ರಸ್ತೆಯಲ್ಲಿ ನೆನ್ನೆ ತಡರಾತ್ರಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಎರಡು ಸಿಮೆಂಟ್ ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಓರ್ವ ಲಾರಿ ಚಾಲಕನ ಕಾಲು ಮುರಿದಿದೆ. ಅಪಘಾತದ ರಭಸಕ್ಕೆ ಎರಡು ಲಾರಿಗಳ ಮುಂಭಾಗ ನಜ್ಜುಗುಜ್ಜಾಗಿದ್ದು, ಸುಮಾರು ಒಂದು ಗಂಟೆಗಳ ಕಾಲ ಏರ್ಪೋರ್ಟ್ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಉಂಟಾಯಿತು.
ಕೆಆರ್ಡಿಸಿಎಲ್ ಬೇಜವಾಬ್ದಾರಿ !
ಕಳೆದ 8 ವರ್ಷಗಳ ಹಿಂದೆ ಬೂದಿಗೆರೆ ಕ್ರಾಸ್ನಿಂದ ಏರ್ಪೋರ್ಟ್ ವರೆಗೆ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿರುವ ಕೆಆರ್ಡಿಸಿಎಲ್ ಇದುವರೆಗೂ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಅವೈಜ್ಙನಿಕ ರಸ್ತೆ ಕಾಮಗಾರಿಯಿಂದ ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವು ನೋವುಗಳು ಸಂಭವಿಸುತ್ತಿವೆ.
ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಕೆಆರ್ಡಿಸಿಎಲ್ ವಿರುದ್ಧ ಎರಡು ಭಾರಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದರು. ಆದರೆ ಈ ಪ್ರತಿಭಟನೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿಭಟನೆ ವೇಳೆ ಸ್ಥಳಕ್ಕೆ ಬಂದು ಕೆಆರ್ಡಿಸಿಎಲ್ ಅಧಿಕಾರಿಗಳು ಆಶ್ವಾಸನೆಗಳನ್ನು ನೀಡಿ ಸುಮ್ಮನಾಗುತ್ತಿದ್ದಾರೆ. ಪ್ರತಿಭಟನೆಗಳು ಉಗ್ರ ಸ್ವರೂಪ ಪಡೆಯುವುದಕ್ಕೂ ಮುನ್ನ ಗಾಡ ನಿದ್ರೆಯಲ್ಲಿರುವ ಕೆಆರ್ಡಿಸಿಎಲ್ ಹಾಗು ಸರಕಾರ ಎಚ್ಚೆತ್ತುಕೊಂಡು ಕೂಡಲೇ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿದೆ.