
ಜಾತ್ರೆ ಹಾಗೂ ರಥಯಾತ್ರೆಗಳ ವೇಳೆ ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸುತ್ತಿದ್ದ ಖತರ್ನಾಕ್ ಲೇಡಿ ಗ್ಯಾಂಗ್ನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಬಾಣಸವಾಡಿ ಪೊಲೀಸರು ಪ್ರಕರಣ ಭೇದಿಸಿದ್ದು, ನಾಲ್ವರು ಕಳ್ಳಿಯರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಕಳೆದ ಜೂನ್ 29 ರಂದು ಬಾಣಸವಾಡಿಯಲ್ಲಿ ನಡೆದಿದ್ದ ಜಗನ್ನಾಥ ರಥಯಾತ್ರೆ ವೇಳೆ ಈ ಕಿಲೇಡಿಗಳು ನಾಲ್ಕು ಜನರ ಬಳಿ ಸುಮಾರು 140 ಗ್ರಾಂ ಚಿನ್ನದ ಸರ ಎಗರಿಸಿದ್ದರು. ಕಟ್ಟರ ಬಳಸಿ ಕತ್ತಿನಲ್ಲಿದ್ದ ಸರ ಎಗರಿಸಿರುವುದು ಎಂದು ತಿಳಿದು ಬಂದಿತ್ತು.

ಈ ಕಿಲೇಡಿಯರ ಬೆನ್ನಟ್ಟಿದ್ದ ಬಾಣಸವಾಡಿ ಪೊಲೀಸರು ಸರಿಸುಮಾರು 300 ಸಿಸಿ ಕ್ಯಾಮಾರಗಳನ್ನು ಪರಿಶೀಲಿಸಿ ಇದರಲ್ಲಿ ದೊರತೆ ಆಧಾರಗಳ ಮೇಲೆ ಈ ಖತರ್ನಾಕ್ ಕಳ್ಳಿಯರನ್ನು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಯಶೋಧ, ಗಾಯತ್ರಿ, ಆಶಾ ಹಾಗೂ ಪ್ರಿಯಾ ಬಂಧಿತ ಆರೋಪಿಗಳಾಗಿದ್ದಾರೆ. ಈ ಆರೋಪಿಗಳು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದೇ ರೀತಿ ಜಾತ್ರೆಗಳಲ್ಲಿ ಕುತ್ತಿಗೆಯಲ್ಲಿದ್ದ ಸರಗಳನ್ನು ಎಗರಿಸುವುದು ಕಂಡು ಬಂದಿದೆ. ಜಾತ್ರೆಗಳು ಮಾತ್ರವಲ್ಲ ದಟ್ಟ ಜನಸಂದಣಿ ಇರುವ ಜಾಗಗಳೇ ಇವರ ಟಾರ್ಗೆಟ್ ಆಗಿತ್ತಂತೆ.
