
ಶಿವಪ್ರಕಾಶ್ ಅಲಿಯಾಸ್ ಬಿಕ್ಳಾ ಶಿವನ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಬೆಂಗಳೂರಿನ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಅಂದಹಾಗೆ ಬೆಂಗಳೂರಿನ ಹಲಸೂರು ಲೇಕ್ ನ ವಾರ್ ಮೆಮೋರಿಯಲ್ ಸರ್ಕಲ್ ಬಳಿ ಶಿವಪ್ರಕಾಶ್ನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಈತ ಲಿಟಿಗೇಷನ್ ಲ್ಯಾಂಡ್ಗಳ ವ್ಯವಹಾರ ಮಾಡುತ್ತಿದ್ದು, ರೌಡಿಸಂ ನಲ್ಲಿ ಸಹ ಆಕ್ಟೀವ್ ಆಗಿದ್ದ ಎನ್ನಲಾಗಿದೆ. ಇನ್ನು ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್ ಹೆಸರು ಸಹ ಕೇಳಿ ಬಂದಿತ್ತು.

ಜಮೀನು ವಿಚಾರಕ್ಕೆ ಬೈರತಿ ಬಸವರಾಜ್ ಬೆಂಬಲಿಗರು ಮತ್ತು ಶಿವಪ್ರಕಾಶ್ ನಡುವೆ ಕಿರಿಕ್ ನಡೆದಿದ್ದು, ಬಿದರಹಳ್ಳಿ ಹೋಬಳಿ ಕಿತ್ತಗನೂರು ಸರ್ವೇ ನಂಬರ್ 212 ಕ್ಕೆ ಸಂಬಂಧಿಸಿದಂತೆ ಜಗದೀಶ್ ಅಲಿಯಾಸ್ ಜಗ್ಗ ಗ್ಯಾಂಗ್ನಿಂದ ಶಿವಪ್ರಕಾಶ್ಗೆ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ. ಈ ಸಂಬಂಧ ಕಳೆದ ಫೆಬ್ರವರಿಯಲ್ಲಿ ಶಿವಪ್ರಕಾಶ್ ಪೊಲೀಸ್ ಕಮಿಷನರ್ಗೆ ಜೀವ ಬೆದರಿಕೆ ಇದೆ ಎಂದು ಬೆದರಿಕೆ ಹಾಕಿದ್ದ ವಿಡಿಯೋ ಸಮೇತ ದೂರು ನೀಡಿದ್ದನಂತೆ. ಬೈರತಿ ಬಸವರಾಜ್, ಜಗದೀಶ್, ಕಿರಣ್ ಹಾಗೂ ಸಹಚರರ ವಿರುದ್ದ ದೂರು ನೀಡಿದ್ದು, ಈ ಸಂಬಂಧ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಹ ದಾಖಲಾಗಿತ್ತು. ಇದೀಗ ದೂರು ಕೊಟ್ಟ ನಾಲ್ಕು ತಿಂಗಳಲ್ಲಿ ಶಿವಪ್ರಕಾಶ್ ಅಲಿಯಾಸ್ ಬಿಕ್ಳು ಶಿವ ಕೊಲೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಬಿಕ್ಳು ಶಿವ ಕೊಲೆಯಾದ ನಂತರ ಈ ಹಿಂದೆ ಅವಾಜ್ ಹಾಕಿದ್ದ ವಿಮಲ್ , ಕಿರಣ್ ಸೇರಿದಂತೆ ಐವರನ್ನು ಪೊಲೀಸರು ಕೃತ್ಯಕ್ಕೆ ಬಳಸಿದ ವಾಹನ ಮತ್ತು ಮಾರಕಾಸ್ತ್ರಗಳ ಸಮೇತ ವಶಕ್ಕೆ ಪಡೆದಿದ್ದಾರೆ.
ಪ್ರಕರಣದಲ್ಲಿ ಎ೧ ಜಗದೀಶ್, ಎ೨ ಕಿರಣ್, ಎ೩ ವಿಮಲ್, ಎ೪ ಅನಿಲ್, ಎ೫ ಬೈರತಿ ಬಸವರಾಜ್ ರನ್ನು ಮಾಡಲಾಗಿದೆ.