
ದೇವನಹಳ್ಳಿ ಸುತ್ತಮುತ್ತ ಯಾವ್ಯಾವ ಬಿಲ್ಡರ್‌ಗಳು ಎಷ್ಟೆಷ್ಟು ಭೂಮಿ ಖರೀದಿಸಿದ್ದಾರೆ, ಯಾರ ಜೊತೆ ಅವರು ಒಪ್ಪಂದ ಮಾಡಿಕೊಂಡಿದ್ದಾರೆ, ಯಾವ ರಾಜಕಾರಣಿಗಳ ಜಮೀನು ಎಷ್ಟಿದೆ, ಹೋರಾಟದ ಹಿಂದೆ ಯಾರ ಕುಮ್ಮಕ್ಕಿದೆ ಎನ್ನುವುದೆಲ್ಲವೂ ನಮಗೆ ಗೊತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ದೇವನಹಳ್ಳಿ ಸುತ್ತಲಿನ ಪರಿಸರದಲ್ಲಿ ಕೃಷಿ ಉಳಿಯಬೇಕು ಎನ್ನುವ ಕೂಗೆದ್ದಿದೆ. ಹೀಗಾಗಿ, ಸರ್ಕಾರವು ಶಾಶ್ವತ ಕೃಷಿ ವಲಯ ಮಾಡುವ ಬಗ್ಗೆಯೂ ಚಿಂತಿಸುತ್ತಿದೆ. ಈಗ ಕೆಲವರು ಇದು ಬೇಡ ಎನ್ನುತ್ತಿದ್ದಾರೆ. ಈ ರೀತಿಯ ದ್ವಂದ್ವ ಸರಿಯಲ್ಲ. ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಹೈಟೆಕ್ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜುಲೈ 15ರಂದು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಒಟ್ಟಿನಲ್ಲಿ ಕೃಷಿ ಮತ್ತು ಕೈಗಾರಿಕೆ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕೆನ್ನುವುದು ತಮ್ಮ ಕಳಕಳಿ ಎಂದಿದ್ದಾರೆ.
ಅಲ್ಲಿ ಕೆಲವರು ಭೂಸ್ವಾಧೀನ ಬೇಡವೆಂದು ಹೋರಾಟ ಮಾಡುತ್ತಿದ್ದಾರೆ. ಮತ್ತೆ ಕೆಲವರು 449 ಎಕರೆ ಜಮೀನನ್ನು ಬಿಟ್ಟುಕೊಡಲು ಸಿದ್ಧವಾಗಿದ್ದು, ಎಕರೆಗೆ 3.5 ಕೋಟಿ ರೂ. ಪರಿಹಾರ ಕೇಳುತ್ತಿದ್ದಾರೆ. ರೈತರಲ್ಲೇ ಈ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳಿವೆ. ಸರ್ಕಾರ ಎಲ್ಲಾ ರೀತಿಯ ಸಾಧಕ-ಬಾಧಕಗಳನ್ನೂ ಪರಿಶೀಲಿಸುತ್ತಿದೆ ಎಂದು ತಿಳಿಸಿದ್ದಾರೆ.
ಶನಿವಾರ ಚನ್ನರಾಯಪಟ್ಟಣ ಹೋಬಳಿ ರೈತ ಹೋರಾಟ ಸಮಿತಿ ಹೆಸರಿನಲ್ಲಿ ಕೆಲವು ರೈತರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, 449 ಎಕರೆಯನ್ನು ಸರ್ಕಾರಕ್ಕೆ ಕೊಡುವುದಾಗಿ ಹೇಳಿದ್ದಾರೆ. ಯೋಜನೆಗೆ ಸಂಬಂಧಿಸಿದಂತೆ ಮೊದಲು ಅಧಿಸೂಚನೆ ಹೊರಟಿದ್ದೇ ಇಷ್ಟು ಭೂಮಿಗೆ. ಸರ್ಕಾರವು ನಿಜವಾದ ರೈತರ ದನಿಗೆ ಬೆಲೆ ಕೊಡುತ್ತದೆಯೇ ವಿನಾ, ರೈತರ ಹೆಸರಿನಲ್ಲಿ ಏನೇನೋ ಮಾತನಾಡುತ್ತಿರುವವರಿಗಲ್ಲ ಎಂದು ಹೇಳಿದ್ದಾರೆ.