
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ದಂಡಾಧಿಕಾರಿಯಾಗಿದ್ದ ಬಾಲಕೃಷ್ಣರವರು ನೆನ್ನೆಯಷ್ಟೇ ನಿವೃತ್ತಿ ಹೊಂದಿದ್ದು, ದೇವನಹಳ್ಳಿ ತಹಸೀಲ್ದಾರ್ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ. ಘಟಾನುಘಟಿ ಕೆಎಎಸ್ ಅಧಿಕಾರಿಗಳು ದೇವನಹಳ್ಳಿ ದಂಡಾಧಿಕಾರಿಯಾಗಲು ದುಂಬಾಲು ಬೀಳುತ್ತಿದ್ದಾರೆ ಎನ್ನಲಾಗುತ್ತಿದೆ.

ಬಾಲಕೃಷ್ಣರವರ ನಂತರ ಈ ಹಿಂದೆ ದೇವನಹಳ್ಳಿ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಅಜಿತ್ ಕುಮಾರ್ ರೈ ಇಲ್ಲಿಗೆ ಮತ್ತೆ ತಹಸೀಲ್ದಾರ್ ಆಗಿ ಬರುತ್ತಾರೆ ಎಂಬುದು ತಾಲ್ಲೂಕಿನ ಬಹುತೇಕರ ಮಾತಾಗಿತ್ತು. ಆದರೆ ಅಜಿತ್ ಕುಮಾರ್ ರೈ ದೇವನಹಳ್ಳಿ ಗೆ ಮತ್ತೆ ತಹಸೀಲ್ದಾರ್ ಆಗಿ ಬರಲು ಒಲವು ತೋರುತ್ತಿಲ್ಲ ಎಂಬುದು ಬಲ್ಲ ಮೂಲಗಳ ಮಾಹಿತಿಯಾಗಿದೆ.

ಮತ್ತೊಂದೆಡೆ ತಹಸೀಲ್ದಾರ್ ಸ್ಥಾನದ ಪೈಪೋಟಿಗೆ ಹೊಸ ಹೆಸರು ಸೇರ್ಪಡೆಯಾಗಿದೆ. ಚಿಕ್ಕಬಳ್ಳಾಪುರ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅನಿಲ್ ಕುಮಾರ್ ಜಿ ದೇವನಹಳ್ಳಿ ತಹಸೀಲ್ದಾರ್ ಆಗಲು ಸಕಲ ಪ್ರಯತ್ನ ಮಾಡುತ್ತಿದ್ದು, ಬಹುತೇಕ ಇವರ ಹೆಸರನ್ನೇ ಸರಕಾರ ಅಂತಿಮ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇಂದು ಅಥವಾ ನಾಳೆ ಸರಕಾರದಿಂದ ದೇವನಹಳ್ಳಿ ತಹಸೀಲ್ದಾರ್ ಯಾರು ಎಂಬುವ ಅಧಿಕೃತ ಆದೇಶ ಹೊರಬೀಳಲಿದೆ.