
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಯಲ್ಲಿ ಬಿಜೆಪಿ ಮುಖಂಡ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಿಂದ ವಕೀಲನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಪರಾಜಿತಗೊಂಡಿದ್ದ ಜಿ.ಎನ್.ವೇಣುಗೋಪಾಲ್ ಮತ್ತು ಮಗ ವಿವೇಕ್ ವಕೀಲನ ಮೇಲೆ ರಕ್ತ ಬರುವ ರೀತಿಯಲ್ಲಿ ಹಲ್ಲೆ ಮಾಡಿದ್ದಾರೆ. ವಕೀಲ ಸಂದೀಪ್ ಎಂಬುವವರ ಮೇಲೆ ಹಲ್ಲೆ ನಡೆದಿದ್ದು, ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ತಂದೆ ಹಾಗೂ ಮಗನ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ.

ಅಂದಹಾಗೆ ಘಟನೆ ನಡೆದಿರುವುದು ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿ. ವಕೀಲ ಸಂದೀಪ್ ತನ್ನ ಕಕ್ಷೀದಾರನ ಜಮೀನಿನಲ್ಲಿ ಅತಿಕ್ರಮವಾಗಿ ವಿದ್ಯುತ್ ಕಂಬ ಹಾಕಿರುವುದನ್ನು ಪರಿಶೀಲಿಸಲು ತೆರಳಿದ್ದಾರೆ. ಈ ವೇಳೆ ವೇಣುಗೋಪಾಲ್ ಮತ್ತು ಮಗ ವಿವೇಕ್ ಅವಾಚ್ಯ ಶಬ್ದಗಳಿಂದ ನಿಂಧಿಸಿ ಹೊಡೆದಿದ್ದಾರೆ ಎಂದು ಸಂದೀಪ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯಕ್ಕೆ ಹಲ್ಲೆಗೊಳಗಾದ ವಕೀಲ ಸಂದೀಪ್ ದೇವನಹಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ಆರೋಪಿಗಳ ವಿರುದ್ಧ ದೇವನಹಳ್ಳಿ ವಕೀಲರ ಸಂಘದ ಸದಸ್ಯರು ಯಾರು ವಕಾಲತ್ತು ಹಾಕಬಾರದು ಎಂದು ಸಂಘದ ಅಧ್ಯಕ್ಷರು ಸೂಚನಾ ಪತ್ರ ಜಾರಿ ಮಾಡಿದ್ದಾರೆ.